Friday, January 20, 2023

ನೋಡಿ ನಕ್ಕಳು ದ್ರೌಪದಿ

ನೋಡಿ ನಕ್ಕಳು ದ್ರೌಪದಿ
ಈ ತನ್ನ ಇನಿಯನನು
ನೋಡಿ ನಕ್ಕಳು ದ್ರೌಪದಿ

ಗಾಂಡೀವವನು ಮರೆತು
ಗೆಜ್ಜೆಕಟ್ಟಿದ ತನ್ನ 
ಧೀರವರ ಪಾಂಡವನ
ವೀರವಿಜಯೀ ಪ್ರಿಯನ
ನೋಡಿ ನಕ್ಕಳು ದ್ರೌಪದಿ 

ಆ ಮತ್ಸಯಂತ್ರವನು
ದ್ರುಪದ ಸಭೆಯಲಿ ಕೆಡುಹಿ
ಧರಿಸಿ ವರಮಾಲೆಯಂ
ತನ್ನ ಕೈಪಿಡಿದವನ
ನೋಡಿ ನಕ್ಕಳು ದ್ರೌಪದಿ 

ಇಂದು ವೈಯಾರದಲಿ
ತಾಳತಟ್ಟುತ ಕುಣಿವ
ಅರ್ಜುನನ ಕಾಣುತಲೆ
ಕಣ್ಣೀರ ಒರೆಸುತಲೆ
ನೋಡಿ ನಕ್ಕಳು ದ್ರೌಪದಿ 

ಸವ್ಯಸಾಚಿಯು ಇವನು
ಸಮರದಲಿ ಸೋಲದವ! 
ಅಂತಃಪುರಕೆ ಸೇರಿ
ಅಜ್ಞಾತವಾಗಿರುವ! 
ನೋಡಿ ನಕ್ಕಳು ದ್ರೌಪದಿ 

ಬಳೆತೊಟ್ಟ ಬೃಹನ್
ನಳೆರೂಪ ಧರಿಸಿರುವ
ಅರ್ಜುನನ ಮಡದಿ ಈ
ಸೈರಂಧ್ರಿ ಅವನನ್ನು
ನೋಡಿ ನಕ್ಕಳು ದ್ರೌಪದಿ 

RSachi, 20 Jan. 2023