Monday, April 28, 2025

The Vamana Story - ವಾಮನಾವತಾರ








ವಾಮನಾವತಾರ
ಅದಿತಿಸುತ ವಾಮನಗೆ
ಅನುದಿನವು ನಮನ
ಅತಿವಿಕ್ರಮನು ಇವ
ಅನವರತ ಪೊರೆವ

ಪ್ರಹ್ಲಾದನ ಪೌತ್ರ
ಬಲಿಚಕ್ರವರ್ತಿ
ದಾನವರ ದೊರೆ ಈತ 
ದಾನದಲಿ  ನಿರತ

ಅಸುರರಿಗೆ ಅಮೃತವು 
ಸಿಗದಿರೆ ಬಲಿಯು
ಗುರುವಿನಾಜ್ಞೆಯ ಮೇರೆ
ಮಾಡೆ ಮಹಾಯಜ್ಞ

ಆ ಯಜ್ಞ ಫಲದಿಂದ
ವಿಶ್ವಜಿತ್ ಬಲಿಯು
ದೇವದಾನವರ್ಗೆಲ್ಲ
ದೊರೆಯಾಗಿ ಮೆರೆದ

ಆಗ ಜಗದೋದ್ಧಾರ
ಹರಿಯ ಅವತಾರ
ಅದಿತಿಕಶ್ಯಪಪುತ್ರ 
ವಾಮನ ಸುಚಿತ್ರ

ಪುಟ್ಟ ವಟು ವಾಮನನು
ಬಲಿಯಜ್ಞದಲ್ಲಿ
ಕೇಳ್ದ ಮೂರಡಿಯಷ್ಟು
ಭೂಮಿ ಬಲಿಯಿಂದ

ಅರಸು ಅಸ್ಮಿತದಲ್ಲಿ 
ಅಸ್ತು ಎಂದಂದ
ವಾಮನನು ನಸುನಕ್ಕಿ
ಬೆಳೆದ ಮಹಕಾಯ

ಎರಡ್ಹೆಜ್ಜೆಗೇ ಅಳೆದ
ಭೂಮಿ ಆಕಾಶ
ಮೂರನೆಯ ಹೆಜ್ಜೆಯನು
ಎಲ್ಲಿ ಇಡಲೆಂದ. 

ಈ ತ್ರಿವಿಕ್ರಮಗೆ ನಮಿಸಿ
ಶರಣಾದ ಬಲಿಯು
ಶಿರದಲ್ಲಿ ಹರಿಪಾದ
ಬಲಿಯಮರನಾದ

ವಾಮನಗೆ ನಮಿಸಿದರು
ಅಸುರಸುರ ಜನರು 
ಋಷಿಪುಂಗವರ ಸ್ತುತಿಗೆ
ಒಲಿದ ಶ್ರೀ ಹರಿಯು

ಹರಿಪಾದ ಪೂಜಿಸುತ
ಧರೆಗಿಳಿಯೆ ಗಂಗೆ
ವಾಮನನ ಅವತಾರ
ಶುಭವಾಯ್ತು ನಮಗೆ 


Rsachi 28 April 2025